ನಂದೂ ರಾಮದಾಸ
18ನೆಯ ಶತಮಾನದ ಹಿಂದೀಕವಿ. ಬಿಹಾರ ಪ್ರದೇಶದ ಮುಜಫರ್‍ಪುರದ ನಿವಾಸಿ. ಗುರು ಬಲರಾಮದಾಸ. ಇದ್ದ ಸ್ಥಳದಲ್ಲೇ ಇದ್ದುಕೊಂಡು ನಿತ್ಯ ಭಜನಪೂಜನಗಳಿಂದ ಜೀವನ ನಡೆಯಿಸಿದ. ವೀತರಾಗಿಯಾದ ಈತ ಹರಿಭಕ್ತ. ಶಬ್ದಸಂಹಿತಾ ವಾಣೀ ಪ್ರಮೋದ ಎಂಬುದು ಈತನ ಕೃತಿ. ಅದು ಪೂರ್ಣವಾಗುವ ಮುನ್ನವೆ ಕವಿ ಗತಿಸಿದನಾಗಿ ಶಿಷ್ಯ ರಘುನಾಥದಾಸ ಅದನ್ನು ಸಂಪೂರ್ಣಗೊಳಿಸಿದ.

ರಾಜ್ಯ, ವೈಭವ ಕ್ಷಣದಲ್ಲಿ ಇದ್ದವು ಇಲ್ಲದಂತಾಗುತ್ತವೆ. ಯಮದೂತರು ಸದಾ ನಮ್ಮ ಬಾಗಿಲಲ್ಲಿ ಬಂಧಿಸಲು ಸಿದ್ದರಾಗಿರುತ್ತಾರೆ ; ಸಮಾಜ, ಶೃಂಗಾರ ಗೋಷ್ಠಿ ಎಲ್ಲವೂ ಮರವಿನಲ್ಲಿ ಮುಳುಗಿಹೋಗುತ್ತವೆ ; ಲಜ್ಜೆ, ಸತ್ಸಂಗ, ಪ್ರೇಮ, ಹರಿಕಥೆ-ಇವು ಘಟಿಸುವುದು ಕಠಿಣ; ಐಹಿಕವಾದುದೆಲ್ಲವನ್ನೂ ನಿರ್ಲಕ್ಷಿಸಿ ಹರಿಸ್ಮರಣೆ ನಿರಂತರ ನಡೆಯಬೇಕು ಎಂಬುದು ಕವಿಯ ಉಪದೇಶಸಾರ.									
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ